ರಕ್ತದ ಒತ್ತಡ - ನಾಳದ ಒಳಗೆ ತುಂಬಿ ಹರಿಯುತ್ತಿರುವ ರಕ್ತ ನಾಳಭಿತ್ತಿಯ ಮೇಲೆ, ರಕ್ತ ಹರಿಯುವ ದಿಶೆಗೆ ಲಂಬನೇರದಲ್ಲಿ ಉಂಟುಮಾಡುವ ಒತ್ತಡ (ಬ್ಲಡ್ ಪ್ರೆಷರ್). ನಾಳಗಳು ತುಂಬಿಕೊಂಡೇ ಇದ್ದು ಮುಂದೆ ಹರಿಯುವುದಕ್ಕೆ ಇರುವ ಅಡಚಣೆಯನ್ನೂ ನಿವಾರಿಸಿಕೊಂಡು ರಕ್ತ ಹರಿಯುತ್ತಲೇ ಇರುವುದರಿಂದ ಅದು ಯಾವಾಗಲೂ ಒತ್ತಡವನ್ನು ಉಂಟುಮಾಡುವುದು ಸ್ಪಷ್ಟ.  ರಕ್ತದ ಒತ್ತಡ ಮತ್ತು ಅದರ ಏರುಪೇರುಗಳ ಬಗ್ಗೆ ಪ್ರಸ್ತಾಪಿಸುವಾಗ ಸಾಮಾನ್ಯವಾಗಿ ಅಪಧಮನಿಗಳು ಅದರಲ್ಲೂ ಎಡತೋಳಿನ ಒಳಪಾಶ್ರ್ವದಲ್ಲಿ ನಾಡಿಮಿಡಿತವನ್ನು ಉಂಟುಮಾಡುತ್ತ. ಸಿಕ್ಕುವ ತೋಳಿನ ಅಪಧಮನಿಯ (ಲೆಫ್ಟ್ ಬ್ರೇಕಿಯಲ್ ಆರ್ಟರಿ) ರಕ್ತದ ಒತ್ತಡವನ್ನು ಗಣಿಸಲಾಗುತ್ತದೆ. ಪ್ರತಿಯೊಂದು ಮಿಡಿತದಲ್ಲೂ ಸುಮಾರು 70 ಮಿಲಿಲೀಟರುಗಳಷ್ಟು ರಕ್ತವನ್ನು ಹೃದಯ ಸಾಕಷ್ಟು ಸಾಮಥ್ರ್ಯದಿಂದ ರೇಚಿಸಿ ಅಪಧಮನಿಯ ವ್ಯೂಹದೊಳಕ್ಕೆ ದೂಡುತ್ತಲೇ ಇರುವುದಷ್ಟೇ. ರಕ್ತನಾಳದಲ್ಲಿ ಕಂಡುಬರುವ ಒತ್ತಡಕ್ಕೆ ಇದು ಒಂದು ಮುಖ್ಯ ಕಾರಣ. ಹೃದಯ ವಿಕಸಿಸಿರುವಾಗ ಅರ್ಥಾತ್, ರಕ್ತ ಅಪಧಮನಿ ವ್ಯೂಹದೊಳಕ್ಕೆ ರೇಚಿಸಲ್ಪಡದಿದ್ದಾಗ ಕೂಡ ರಕ್ತದ ಒತ್ತಡ ಇದ್ದೇ ಇರುತ್ತದೆ. ಇದಕ್ಕೆ ಕಾರಣ ಅಪಧಮನಿಗಳ ಸ್ಥಿತಿಸ್ಥಾಪಕ ಸಾಮಥ್ರ್ಯ. (ಇಲಾಸ್ಟಿಸಿಟಿ)  ಹೃದಯ ಸಂಕುಚಿಸಿದಾಗ ರೇಚಿಸಲ್ಪಟ್ಟ ರಕ್ತ ಅವುಗಳ ತಾತ್ಕಾಲಿಕ ಹಿಗ್ಗುವಿಕೆಯಿಂದ ಅಲ್ಲಿಯೇ ಅಪಧಮನಿಗಳು ತಮ್ಮ ಸ್ಥಿತಿಸ್ಥಾಪಕ ಸಾಮಥ್ರ್ಯದಿಂದ ಮಾಮೂಲಿನ ಸ್ಥಿತಿಗೆ ಕುಗ್ಗಿಕೊಳ್ಳುತ್ತವೆ. ಹಾಗಾದಾಗ ನೆಲೆಯೂರಿರುವ ರಕ್ತ ಮುಂದೂಡಲ್ಪಡುತ್ತದೆ ಆದ್ದರಿಂದಲೇ ಹೃದಯ ವ್ಯಾಕೋಚಿಸಿರುವಾಗಲೂ ಅಪಧಮನಿಗಳಲ್ಲಿ ರಕ್ತ ಪ್ರವಹಿಸುತ್ತಲೇ ಇರುತ್ತದೆ ಮಾತ್ರವಲ್ಲ ಒತ್ತಡವನ್ನು ಉಂಟುಮಾಡುತ್ತದೆ ಕೂಡ.  ಈ ತಾಂತ್ರಿಕತೆ (ಮೆಕಾನಿಸಮ್) ಇಲ್ಲದೆ ಹೋಗಿದ್ದರೆ ಅಪಧಮನಿಗಳಲ್ಲಿ ರಕ್ತ ನಿರಂತರವಾಗಿ ಪ್ರವಹಿಸದೆ ಬಿಟ್ಟು ಬಿಟ್ಟು ಪ್ರವಹಿಸಬೇಕಾಗುತ್ತಿತ್ತು ಮತ್ತು ರಕ್ತ ಪ್ರವಾಹವಾಗದ ವೇಳೆ ರಕ್ತದ ಒತ್ತಡವೂ ಬಹುಶಃ ಸೊನ್ನೆ ಆಗಬೇಕಾಗುತ್ತಿತ್ತು.

ಹೃದಯ ಮಿಡಿದು ರಕ್ತವನ್ನು ಅಪಧಮನಿ ವ್ಯೂಹದೊಳಕ್ಕೆ ನುಗ್ಗಿಸುವಾಗ ರಕ್ತದ ಒತ್ತಡ ಹೆಚ್ಚಾಗಿರುತ್ತದೆಂಬುದೂ ಎರಡು ಹೃನ್ಮಿಡಿತಗಳ ನಡುವೆ ಹೃದಯ ವ್ಯಾಕೋಚಿಸುವ ಸಮಯದಲ್ಲಿ ರಕ್ತದ ಒತ್ತಡ ಕಡಿಮೆಯಾಗಿರುತ್ತದೆಂಬುದೂ ವ್ಯಕ್ತ. ಇವಕ್ಕೆ ಅನುಕ್ರಮವಾಗಿ ಸಿಸ್ಟಾಲಿಕ್ ಒತ್ತಡ ಮತ್ತು ಡೈಯಾಸ್ಟಾಲಿಕ್ ಒತ್ತಡ ಎಂದು ಹೆಸರು. U-ಆಕಾರದ ಕೊಳವೆಯ ಬಾಹುಗಳಲ್ಲಿ ಅರ್ಧಮಟ್ಟಿಗೆ ತುಂಬಿರುವ ಪಾದರಸದ ಮಟ್ಟವ್ಯತ್ಯಾಸ ನಿರ್ಧರಿಸಿ ಒತ್ತಡವನ್ನು ನಮೂದಿಸಲಾಗುವುದಷ್ಟೇ. ಹೀಗೆ ಮಾಡಿನೋಡಿದಾಗ ಮಧ್ಯವಯಸ್ಕ ಗಂಡರಲ್ಲಿ ಸಾಮಾನ್ಯವಾಗಿ ಸಿಸ್ಟಾಲಿಕ್ ಒತ್ತಡ 110 ರಿಂದ 130 ಮಿ.ಮೀ.ನಷ್ಟೂ ಡೈಯಾಸ್ಟಾಲಿಕ್ ಒತ್ತಡ 70 ರಿಂದ 90 ಮಿ.ಮೀ. ನಷ್ಟು ಇರುತ್ತದೆ. ಹೆಂಗಸರಲ್ಲಿ ಮತ್ತು ಮಕ್ಕಳಲ್ಲಿ ಒತ್ತಡ ಮಟ್ಟ ಹತ್ತಿಪ್ಪತ್ತು ಮಿ.ಮೀ.ಗಳಷ್ಟು ಕಡಿಮೆ ಇರುತ್ತದೆ. 45 - 50 ವರ್ಷಕ್ಕೆ ಮೀರಿದ ವಯಸ್ಸಿನ ವ್ಯಕ್ತಿಗಳಲ್ಲಿ ಸಿಸ್ಟಾಲಿಕ್ ಒತ್ತಡ ಸಾಮಾನ್ಯವಾಗಿ ಅವರ ವಯಸ್ಸಿಗೆ ನೂರು ಸೇರಿಸಿದರೆ ಎಷ್ಟೋ ಅಷ್ಟು ಮಿಮೀ ಇರುವುದು ಸ್ವಾಭಾವಿಕ. ತೀರ ಇಳಿವಯಸ್ಸಿನಲ್ಲಿ ಈ ಮಟ್ಟ ಪುನಃ ಕಡಿಮೆ ಆಗುತ್ತದೆ.  ಆರೋಗ್ಯಸ್ಥಿತಿಯಲ್ಲಿ ಡೈಯಾಸ್ಟಾಲಿಕ್ ಒತ್ತಡ 60 ಮಿಮೀ. ಗಿಂತಲೂ ಕಡಿಮೆ ಆಗಿಯೂ 90 ಮಿ.ಮೀ. ಗಿಂತ ಹೆಚ್ಚು ಆಗಿರುವುದಿಲ್ಲ. ಹಾಗೆಯೇ ಸಿಸ್ಟಾಲಿಕ್ ಒತ್ತಡ 100 ಮಿ.ಮೀ. ಗಿಂತಲೂ ಕಡಿಮೆ ಆಗಿರುವುದಿಲ್ಲ. ಶ್ರಮಕೆಲಸ, ವ್ಯಾಯಾಮಗಳ ವೇಳೆ ಇದು 250 ಮಿ.ಮೀ.ಗಿಂತಲೂ ಮೀರಿರಬಹುದು. ರಕ್ತದ ಒತ್ತಡದಲ್ಲಿ ವೈಯಕ್ತಿಕ ವ್ಯತ್ಯಾಸವಿರುವುದರ ಜೊತೆಗೆ ಅದೇ ವ್ಯಕ್ತಿಯಲ್ಲಿ ದಿವಸದ ವಿವಿಧ ವೇಳೆಗಳು ವ್ಯಕ್ತಿರಕ್ತದ ಒತ್ತಡವನ್ನು ಒಂದು ಸಲ ಮಾಪಿಸಿ ಇಷ್ಟೇ ಎಂದು ಹೇಳುವುದು ತಪ್ಪಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೂ ವ್ಯಕ್ತಿಯ ಎಡತೋಳನ್ನು ಆತನ ಹೃದಯದ ಮಟ್ಟದಲ್ಲಿಟ್ಟು ಬಳಿಕ ಆ ತೋಳನ್ನು ನೀಡಿಸಿ ರಕ್ತದ ಒತ್ತಡವನ್ನು ಮಾಪಿಸಬೇಕು. ನಾಲ್ಕಾರು ಮಿನಿಟುಗಳು ಬಿಟ್ಟು ಇನ್ನೊಂದು ಸಲ ಮತ್ತು ಹೀಗೆಯೇ ಮತ್ತೊಂದು ಸಲ ಮಾಪಿಸಿ ಒತ್ತಡ ಇಷ್ಟೇ ಎಂದು ನಿರ್ಧರಿಸಿ ನಮೂದಿಸಬೇಕು.  ರಕ್ತದ ಒತ್ತಡವನ್ನು 120 / 80 ಮಿ.ಮೀ. 135 / 95 ಮಿ.ಮೀ. ಇತ್ಯಾದಿಯಾಗಿ ವರದಿ ಮಾಡುವುದು ರೂಢಿ. ಮೊದಲನೆಯ ಸಂಖ್ಯೆ ಸಿಸ್ಟಾಲಿಕ್ ಒತ್ತಡವನ್ನೂ ಎರಡನೆಯ ಸಂಖ್ಯೆ ಡೈಯಾಸ್ಟಾಲಿಕ್ ಒತ್ತಡವನ್ನೂ ಸೂಚಿಸುತ್ತದೆ.

ರಕ್ತದ ಒತ್ತಡಮಾಪನೆ : ಪ್ರಾಯೋಗಿಕವಾಗಿ ಪ್ರಾಣಿಗಳ ರಕ್ತನಾಳವನ್ನು ಕೊಯ್ದು ಅದನ್ನು ನೇರವಾಗಿ ಪಾದರಸ ತುಂಬಿದ U ಆಕಾರದ ನಾಳಕ್ಕೆ ಸೇರಿಸಿ ರಕ್ತದ ಒತ್ತಡವನ್ನು ಮಾಪಿಸಬಹುದು. ಅದರ ಮನುಷ್ಯರಲ್ಲಿ ರಕ್ತದ ಒತ್ತಡವನ್ನು ಮಾಪಿಸಲು ರಕ್ತದೊತ್ತಡವಮಾಪಕ (ಸ್ಪಿಗ್ಮೋಮ್ಯಾನೋಮೀಟರ್) ಎಂಬ ಸಲಕರಣೆ ಇದೆ. ಇದರಲ್ಲಿ ಮುಖ್ಯ ಭಾಗಗಳಿವೆ. ಒಂದು ಒತ್ತಡಮಾಪಕ, ಇನ್ನೊಂದು ಬಟ್ಟೆಯಿಂದ ಆವರಿಸಲ್ಪಟ್ಟ 10 ಸೆಂ.ಮೀ ಅಗಲ ಮತ್ತು 25 ಸೆಂ.ಮೀ ಉದ್ದದ ರಬ್ಬರ್ ಚೀಲ. ಚೀಲದಿಂದ ಎರಡು ಕೊಳವೆಗಳು ಹೊರಟಿರುತ್ತವೆ.  ಒಂದು ಕೊಳವೆ ಚೀಲವನ್ನು ಒತ್ತಡಮಾಪಕಕ್ಕೆ ಲಗತ್ತಿಸುತ್ತದೆ ಮತ್ತು ಚೀಲದಲ್ಲಿಯ ವಾಯುವಿನ ಒತ್ತಡವನ್ನು ತಿಳಿಸುತ್ತದೆ. ಇನ್ನೊಂದನ್ನು ರಬ್ಬರ್ ಬುರುಡೆಗೆ (ಬಲ್ಬ್) ಲಗತ್ತಿಸಿರಲಾಗುತ್ತದೆ.  ಈ ಬುರುಡೆಯನ್ನು ಪದೇ ಪದೇ ಅವುಕುತ್ತ ರಬ್ಬರ್ ಚೀಲಕ್ಕೆ ವಾಯುವನ್ನು ತುಂಬಬಹುದು. ಬುರುಡೆಯಮೂತಿಗೆ ಸೇರಿದಂತೆ ಒಂದು ನಲ್ಲಿ ಇದೆ. ಇದನ್ನು ಬಳಸಿ ಒತ್ತಡವನ್ನು ಕಡಿಮೆ ಮಾಡಬಹುದು.

ರಬ್ಬರ್ ಚೀಲವನ್ನು ವ್ಯಕ್ತಿಯ ಎಡತೋಳಿನ ಸುತ್ತ ಸುತ್ತಿ ಅದನ್ನು ಒತ್ತಡಮಾಪಕಕ್ಕೂ ರಬ್ಬರ್ ಬುರುಡೆಗೂ ಲಗತ್ತಿಸಲಾಗುತ್ತದೆ. ಅನಂತರ ಬುರುಡೆಯನ್ನು ಒತ್ತಿ ಒತ್ತಿ ಚೀಲದೊಳಕ್ಕೆ ವಾಯುವನ್ನು ತುಂಬಲಾಗುವುದು, ಎಡಗೈ ಮಣಿಗಂಟಿನಲ್ಲಿ ನಾಡಿಮಿಡಿತ ನಿಂತುಹೋಗುವ ತನಕವೂ ಹೀಗೆ ವಾಯುವನ್ನು ತುಂಬುತ್ತಿರಬೇಕು. ಅನಂತರ ವಾಯುವನ್ನು ನಲ್ಲಿಯ ಮೂಲಕ ನಿಧಾನವಾಗಿ ಹೊರಬಿಡುತ್ತ ಯಾವ ಒತ್ತಡಮಟ್ಟದಲ್ಲಿ ನಾಡಿ ಪುನಃ ಸ್ಪರ್ಶವೇದ್ಯವಾಗುತ್ತದೆ ಎಂಬುದನ್ನು ಒತ್ತಡ ಮಾಪಕದ ಮೂಲಕ ನೋಡಿಕೊಳ್ಳಬೇಕು. ಅನಂತರ ನಲ್ಲಿಯನ್ನೂ ಪೂರ್ತಿಯಾಗಿ ಸಡಿಲಿಸಬೇಕು. ಹೀಗೆ ಎರಡು ಮೂರು ಬಾರಿ ಮಾಡಿ ನಿರ್ಧರಿಸಿದ ಒತ್ತಡಮಟ್ಟವೇ ರಕ್ತದ ಸಿಸ್ಟಾಲಿಕ್ ಒತ್ತಡ ಮಟ್ಟ ಆಗುತ್ತದೆ. ಡೈಯಾಸ್ಟಾಲಿಕ್ ಒತ್ತಡ ಮಟ್ಟವನ್ನೂ ಈ ರೀತಿಯ ನಾಡಿಸ್ಪರ್ಶವಿಧಾನದಿಂದ (ಪ್ಯಾಲ್‍ಪೇಟರಿ ಮೆಥೆಡ್) ಮಾಪಿಸಲು ಸಾಧ್ಯವಿಲ್ಲ. ಇದನ್ನು ಶ್ರವಣ ವಿಧಾನದಿಂದ (ಆಸ್ಕಲ್ ಟೇಟರಿ ಮೆಥೆಡ್) ಮಾಪಿಸಬೇಕು. ಇದಕ್ಕೆ ಶ್ರವಣನಳಿಕೆ (ಸ್ಟೆಥಾಸ್ಕೋಪ್; ಎದೆದರ್ಶಕ) ಹೆಚ್ಚಿನ ಸಲಕಣೆಯಾಗಿ ಅಗತ್ಯವಾಗುತ್ತದೆ. ಸ್ಪರ್ಶವಿಧಾನದಂತೆ ಈ ವಿಧಾನದಲ್ಲೂ ಮಣಿಗಂಟಿನಲ್ಲಿ ನಾಡಿ ಮರೆ ಆಗುವ ತನಕ ಚೀಲದ ಒತ್ತಡವನ್ನು ಮೊದಲು ಏರಿಸಲಾಗುತ್ತದೆ. ಅನಂತರ ಶ್ರವಣನಳಿಕೆಯನ್ನು ಎಡಮೊಳಕೈ ಮುಂಭಾಗದಲ್ಲಿ ನಾಡಿ ಸಿಕ್ಕುವ ಸ್ಥಳದಲ್ಲಿಟ್ಟು ಸದ್ದು ಕೇಳುವುದಕ್ಕೆ ಸಿದ್ಧಮಾಡಿಕೊಳ್ಳಬೇಕು. ಅನಂತರ ನಿಧಾನವಾಗಿ ರಬ್ಬರ್ ಚೀಲದ ವಾಯು ಒತ್ತಡವನ್ನು ಕಡಿಮೆ ಮಾಡುತ್ತ ಶ್ರವಣನಳಿಕೆಯ ಮೂಲಕ ಕೇಳಿಬರುವ ಸದ್ದುಗಳನ್ನು ಆಲಿಸಬೇಕು. ನಾಡಿ ಮರೆ ಆಗಿರುವಾಗ ಏನು ಸದ್ದೂ ಕೇಳಿಸುವುದಿಲ್ಲ. ಆದರೆ ಚೀಲದ ಒತ್ತಡವನ್ನು ಕಡಿಮೆ ಮಾಡಿ ನಾಡಿ ಸ್ಪರ್ಶ ವೇದ್ಯವಾಗುವುದಕ್ಕೆ ಸ್ವಲ್ಪ ಹಿಂದೆಮುಂದೆ, ಕಡ್ಡಿಯಿಂದ ಮೇಜನ್ನು ಕುಟ್ಟಿದಂತೆ ಸದ್ದು (ಟ್ಯಾಪಿಂಗ್ ಸೌಂಡ್) ಕೇಳುವುದಕ್ಕೆ ಪ್ರಾರಂಭವಾಗುತ್ತದೆ.  ಈ ಒತ್ತಡ ಮಟ್ಟವೇ ಸಿಸ್ಟಾಲಿಕ್ ಒತ್ತಡಮಟ್ಟ. ರಬ್ಬರ್ ಚೀಲದಿಂದ ವಾಯುವನ್ನು ನಿಧಾನವಾಗಿ ಬಿಡುತ್ತ ಬಂದರೆ ಇನ್ನೂ 10 - 15 ಮಿ.ಮೀ. ಗಳಷ್ಟು ಒತ್ತಡ ಇಳಿಯುವ ತನಕವೂ ಕುಟ್ಟುವಂಥ ಶಬ್ದ ಕೇಳಿಬರುತ್ತಿದ್ದು ಕ್ರಮೇಣ ಅದು ಮರ್ಮರವಾದಂತೆ (ಮರ್ಮರ್) ಕೇಳಿಸುತ್ತದೆ.  ಇದು ಇನ್ನೂ 10 - 15 ಮಿ.ಮೀ. ಒತ್ತಡ ಇಳಿಯುವ ತನಕ ಕೇಳಿಸುತ್ತಿದ್ದು ಸದ್ದು ಇದ್ದಕ್ಕಿದ್ದಂತೆ ಪುನಃ ಜೋರಾಗುತ್ತದೆ. (ಲೌಡ್ ಬ್ಯಾಗಿಂಗ್).  ಮುಂದೆ ಸದ್ದು ಹಠಾತ್ತಾಗಿ ಧನಿಗುಂದಿ (ಮಫಲ್ಡ್) ಎಲ್ಲೋ ದೂರದಿಂದ ಅಸ್ಪಷ್ಟವಾಗಿ ಕೇಳುವಂತಿದ್ದು ಕೊನೆಗೆ ನಿಂತೇಹೋಗುತ್ತದೆ. ಹೀಗೆ ಸದ್ದು ನಿಂತುಹೋದಕ್ಷಣದ ಒತ್ತಡಮಟ್ಟವೇ ಡೈಯಾಸ್ಟಾಲಿಕ್ ಒತ್ತಡಮಟ್ಟ.

ಶ್ರವಣ ನಳಿಕೆ ಹಾಗೂ ಮಾಪಕನ ಶ್ರವಣಸಾಮಥ್ರ್ಯ ಇವುಗಳ ಸೂಕ್ಷ್ಮತೆಯ ವ್ಯತ್ಯಾಸದಿಂದಾಗಿ ಒಬ್ಬೊಬ್ಬ ಮಾಪಕನೂ ನಿರ್ಧರಿಸಿದ ರಕ್ತದ ಒತ್ತಡದ ಮಟ್ಟ 5 - 10 ಮಿಮೀ ನಷ್ಟು ವ್ಯತ್ಯಾಸವಾಗಿರಬಹುದು. ಆದ್ದರಿಂದ ವ್ಯಕ್ತಿಯ ರಕ್ತದ ಒತ್ತಡವನ್ನು ಪದೇ ಪದೇ ಮಾಪಿಸುತ್ತಿರಬೇಕಾದರೆ ಒಂದೇ ಮಾಪಕ, ಒಂದೆ ಹತ್ಯಾರುಗಳನ್ನು ಬಳಸಿ ಮಾಪಿಸಬೇಕು. ಈಚೆಗೆ ಕೆಲವಾರು ವರ್ಷಗಳಿಂದ (ಸು. 1980 ರಿಂದ) ವೈಯಕ್ತಿಕವಾದ ಇಂಥ ವ್ಯತ್ಯಾಸ ಉಂಟಾಗದಂತೆ ವಿಶಿಷ್ಟ ಎಲೆಕ್ಟ್ರಾನಿಕ್ ರಕ್ತದೊತ್ತಡ ಮಾಪಕಗಳು ತಯಾರಾಗಿವೆ.  ಯಾಂತ್ರಿಕವಾಗಿಯೇ ಇವು ಸಿಸ್ಟಾಲಿಕ್ ಹಾಗೂ ಡೈಯಾಸ್ಟಾಲಿಕ್ ಒತ್ತಡಗಳನ್ನು ಸೂಚಿಸುತ್ತವೆ.

ರಕ್ತದ ಒತ್ತಡ ಉಂಟಾಗುವುದಕ್ಕೆ ಕಾರಣಗಳು : ಪ್ರತಿಯೊಂದು ಹೃದಯ ಮಿಡಿತದಲ್ಲೂ ಸುಮಾರು 70 ಮಿಲಿಲೀಟರ್‍ಗಳಷ್ಟು ರಕ್ತ ಈ ಮೊದಲೇ ರಕ್ತದಿಂದ ತುಂಬಿಯೇ ಇರುವ ಅಪಧಮಿನಿ ವ್ಯೂಹಕ್ಕೆ ನುಗ್ಗುವುದು ಮತ್ತು ಹೃದಯ ವಿಕಸಿಸುತ್ತಿರುವಾಗ ಅಪಧಮನಿಗಳ ಸ್ಥಿತಿಸ್ಥಾಪಕ ಸಾಮಥ್ರ್ಯ ಇವು ನಾಳಗಳೊಳಗಿನ ರಕ್ತದ ಒತ್ತಡವನ್ನು ಉಂಟುಮಾಡುವುದಕ್ಕೆ ಮುಖ್ಯ ಕಾರಣಗಳು ಎಂದು ಈಗಾಗಲೇ ಹೇಳಿದೆ. ಇದರ ಜೊತೆಗೆ ರಕ್ತದ ಒತ್ತಡ ಉಂಟಾಗುವುದಕ್ಕೆ ಬೇರೆ ಕಾರಣಗಳೂ ಇವೆ. ರಕ್ತನಾಳಗಳ ಒಳವಕಾಶದ ಗಾತ್ರ (ಕೆಪ್ಯಾಸಿಟಿ) ದೇಹದಲ್ಲಿ ಚಲಿಸುತ್ತಿರುವ ರಕ್ತದ ಗಾತ್ರಕ್ಕಿಂತಲೂ (ಸರ್‍ಕ್ಯೂಲೇಟಿಂಗ್ ಬ್ಲಡ್ ವಾಲ್ಯೂಮ್) ಸ್ವಲ್ಪ ಕಡಿಮೆಯಾಗೇ ಇರುವುದರಿಂದ ನಾಳಗಳೊಳಗೆ ತುಂಬಿರುವ ರಕ್ತ ಒತ್ತಡದಿಂದಲೇ ಕೂಡಿರುತ್ತದೆ.  ರಕ್ತದ ಪ್ರಮಾಣ ಹೆಚ್ಚಿದರೆ ಈ ಒತ್ತಡವೂ ಹೆಚ್ಚುತ್ತದೆ. ಕಡಿಮೆ ಆದರೆ ರಕ್ತದ ಒತ್ತಡವೂ ಕಡಿಮೆ ಆಗುತ್ತದೆ. ಆದರೆ ಸಾಮಾನ್ಯವಾಗಿ ರಕ್ತಪ್ರಮಾಣದಲ್ಲಿ ಅಂಥ ಏರುಪೇರುಗಳಾಗುವುದಿಲ್ಲವಾದ್ದರಿಂದ ಇದು ರಕ್ತದ ಒತ್ತಡವನ್ನು ಹೆಚ್ಚು ಕಡಿಮೆ ಮಾಡುವ ಸಂಭವವೂ ಕಡಿಮೆ.  ರಕ್ತದಂಥ ಸ್ನಿಗ್ದದ್ರವ ಸಣ್ಣವ್ಯಾಸದ ಕೊಳವೆಯ ಮೂಲಕ ಪ್ರವಹಿಸುವಾಗ ಹೆಚ್ಚಿನ ಅಡ್ಡಿಯನ್ನು ಎದುರಿಸಬೇಕಾಗುತ್ತದೆ.  ಅಡ್ಡಿ ಹೆಚ್ಚಿದಷ್ಟು ಹಿಮ್ಮೊಗ ಒತ್ತಡ (ಬ್ಯಾಕ್ ಪ್ರೆಷರ್) ಹೆಚ್ಚಿ ರಕ್ತದ ಒತ್ತಡ ಹೆಚ್ಚಾಗಬಹುದು. ಅಂತೆಯೇ ರಕ್ತಪ್ರವಾಹದ ವೇಗ ಕಡಿಮೆ ಆಗಿ ನಾಳಗಳ ಉದ್ದ ಕಡಿಮೆ ಆಗಿದ್ದರೆ ರಕ್ತದ ಒತ್ತಡ ತಗ್ಗುತ್ತದೆ. ಆದರೆ ಇವೆರಡೂ ವ್ಯಕ್ತಿಯಲ್ಲಿ ಬದಲಾಗವು. ಆದ್ದರಿಂದ ಇವು ರಕ್ತದ ಒತ್ತಡಕ್ಕೆ ಕಾರಣವಾಗುತ್ತವೆಯೇ ಹೊರತು ಅದರ ಏರುಪೇರಿಗೆ ಕಾರಣವಾಗುವುದಿಲ್ಲ. ಹೀಗೆಯೇ ರಕ್ತ ಸ್ನಿಗ್ಧದ್ರವವಾಗಿರುವಿಕೆ (ವಿಸ್ಕಸ್ ಪ್ಲೂಯಿಡ್). ಸ್ನಿಗ್ಧತ್ವ (ವಿಸ್ಕಾಸಿಟಿ) ಹೆಚ್ಚಿದಷ್ಟೂ ಕಿರಿನಾಳಗಳಲ್ಲಿ ಆ ದ್ರವ ಪ್ರವಹಿಸಿವುದು ಕಷ್ಟ. ಆದ್ದರಿಂದ ಅದು ಉಂಟುಮಾಡುವ ಒತ್ತಡ ಹೆಚ್ಚು. ಸ್ನಿಗ್ದತ್ವ ಕಡಿಮೆ ಆದರೆ ಪ್ರವಾಹ ಅಡಚಣೆಯೂ ಕಡಿಮೆ; ಆದ್ದರಿಂದ ಉಂಟಾಗುವ ಒತ್ತಡವೂ ಕಡಿಮೆ. ಆದರೆ ಈ ವಿಷಯವೂ ರಕ್ತ ಒತ್ತಡದ ಏರುಪೇರಿಗೆ ಕಾರಣವಾಗುವುದು ವಿರಳ. ಏಕೆಂದರೆ ರಕ್ತದ ಸ್ನಿಗ್ಧತ್ವದಲ್ಲಿ ಆರೋಗ್ಯಸ್ಥಿತಿಯಲ್ಲಿಯ ಏರುಪೇರುಗಳು ವಿರಳ. ಮೇಲಿನ ಎರಡು ಪ್ರಸಂಗಗಳಲ್ಲಿ ಸ್ನಿಗ್ಧರಕ್ತ ಸಣ್ಣವ್ಯಾಸದ ರಕ್ತನಾಳಗಳ ಮೂಲಕ ಪ್ರವಹಿಸುವಾಗ ಪ್ರವಾಹಕ್ಕೆ ಅಡಚಣೆ ಆದಂತಾಗಿ ಒತ್ತಡ ಉಂಟಾಗುವುದು ಕಂಡುಬಂದಿದೆ. ಅಪಧಮನಿಗಳು ಪದೇ ಪದೇ ಕವಲಾಗುತ್ತ ಅಂತೆಯೇ ಅವುಗಳ ವ್ಯಾಸ ಕಡಿಮೆ ಆಗುತ್ತ ಕಿರಿವ್ಯಾಸದ ನಾಳಗಳಾಗುವುದು ಈ ಕಿರಿ ಅಪಧಮನಿಗಳ ವ್ಯಾಸ ಇನ್ನೂ ಕುಗ್ಗಿ ಅಥವಾ ಹಿಗ್ಗಿ ಪ್ರವಾಹದ ಅಡಚಣೆಯನ್ನು ಹೆಚ್ಚಿಸುವುದು ಇಲ್ಲವೇ ಕಡಿಮೆ ಆಗುವುದು ಅಪಧಮನಿ ವ್ಯೂಹದ ವೈಶಿಷ್ಟ್ಯ. ಆದ್ದರಿಂದ ಪ್ರವಾಹದ ಅಡಚಣೆ ಕಿರಿಅಪಧಮನಿಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಒಟ್ಟಿನಲ್ಲಿ ಸಿಸ್ಟಾಲಿಕ್ ಒತ್ತಡಕ್ಕೆ ಇತರೆ ಕಾರಣಗಳ ಜೊತೆಗೆ ಹೃದಯದಿಂದಲೇ ರೇಚಿಸಲ್ಪಡುವ ಪ್ರಮಾಣ ಮುಖ್ಯ ಕಾರಣ. ಡೈಯಾಸ್ಟಾಲಿಕ್ ಒತ್ತಡಕ್ಕೆ ಇತರ ಕಾರಣಗಳ ಜೊತೆಗೆ ಅಪಧಮನಿಗಳ ಸ್ಥಿತಿಸ್ಥಾಪಕ ಸಾಮಥ್ರ್ಯವೂ ಮುಖ್ಯ ಕಾರಣ. ಎರಡಕ್ಕೂ ಕಿರಿಅಪಧಮನಿಗಳ ಸ್ಥಿತಿಸ್ಥಾಪಕ ಸಾಮಥ್ರ್ಯವೂ ಮುಖ್ಯ ಕಾರಣ.  ಈ ಕಾರಣಗಳಲ್ಲೇ ಸಾಮಾನ್ಯವಾಗಿ ಹೆಚ್ಚು ಕಡಿಮೆ ಕಿರಿಅಭಿದಮನಿಗಳ ವ್ಯಾಸ ಕಿರಿದಾಗಿರುವಿಕೆ ಇವೆರಡೂ ಒಟ್ಟಿಗೆ ಹೆಚ್ಚಾದರೆ ರಕ್ತದ ಒತ್ತಡ ಹೆಚ್ಚಾಗುವುದೂ ಎರಡೂ ಏಕಕಾಲದಲ್ಲಿಯೇ ಕಡಿಮೆ ಆದರೆ ರಕ್ತದ ಒತ್ತಡ ಕಡಿಮೆ ಆಗುವುದೂ ವ್ಯಕ್ತ.  ಆದರೆ ಸಾಮಾನ್ಯವಾಗಿ ಆರೋಗ್ಯಸ್ಥಿತಿಯಲ್ಲಿ ರಕ್ತದ ಒತ್ತಡದ ಏರಿಕೆ ಅಥವಾ ಕುಸಿತ ಹೆಚ್ಚು ಕಾಲ ಇವಿರುವುದಿಲ್ಲ.  ಶೀಘ್ರವಾಗಿಯೇ ಒತ್ತಡ ಮಾಮೂಲು ಘಟ್ಟಕ್ಕೆ ಹಿಂತಿರುಗುತ್ತದೆ.  ಇದರ ತಾಂತ್ರಿಕತೆ ಇಷ್ಟೇ.  ಹೃದಯದಿಂದ ರಕ್ತರೇಚನೆ ಹೆಚ್ಚಿ ರಕ್ತದ ಒತ್ತಡ ಹೆಚ್ಚಿದಾಗ ಕಿರಿಅಪಧಮನಿಗಳ ವ್ಯಾಸ ದೊಡ್ಡದಾಗಿ ಏರಿದ ಮಟ್ಟ ಇಳಿಯುತ್ತದೆ.  ಹೃದಯದಿಂದ ಹೊರದೂಡಲ್ಪಟ್ಟ ರಕ್ತದ ಪ್ರಮಾಣ ಕಡಿಮೆ ಆಗಿ ರಕ್ತದ ಒತ್ತಡ ಕುಸಿದರೆ ಕಿರಿ ಅಪಧಮನಿಗಳು ಸಂಕೋಚನೆಗೊಂಡು ಅವುಗಳ ವ್ಯಾಸ ಇನ್ನೂ ಸಣ್ಣದಾಗಿ ರಕ್ತದ ಒತ್ತಡ ಮಾಮೂಲಿನ ಮಟ್ಟಕ್ಕೆ ಏರುತ್ತದೆ.  ಇಂಥ ನಿಯಂತ್ರಣ ಮಿದುಳಿನ ಪುಚ್ಛ ಭಾಗವೆನಿಸುವ ಮೆಡ್ಯುಲ್ಲ ಎಂಬಲ್ಲಿರುವ ನರಕೋಶಕೇಂದ್ರಗಳಿಂದ ಸ್ವಾಧಿನಾತೀತವಾಗಿ (ಇನ್‍ವಾಲಂಟರಿಲಿ) ಸಾಧಿಸಲ್ಪಡುತ್ತದೆ.
ಸಿಸ್ಟಾಲಿಕ್ ಒತ್ತಡಕ್ಕೂ ಡೈಯಾಸ್ಟಾಲಿಕ್ ಒತ್ತಡಕ್ಕೂ ಇರುವ ವ್ಯತ್ಯಾಸಕ್ಕೆ ಪಲ್ಸ್ ಒತ್ತಡ ಎಂದು ಹೆಸರು. ಇದು ಮುಖ್ಯವಾಗಿ ಹೃದಯ ಎಷ್ಟು ಬಲವಾಗಿ ರಕ್ತವನ್ನು ಅಪಧಮನಿ ವ್ಯೂಹಕ್ಕೆ ನುಗ್ಗಿಸುತ್ತದೆ ಎನ್ನುವುದನ್ನು ಸೂಚಿಸುತ್ತದೆ. 

ರಕ್ತದ ಒತ್ತಡಕ್ಕೆ ಸಂಬಂಧಿಸಿದ ರೋಗಗಳು : ವ್ಯಕ್ತಿಗೆ ಸಹಜವಾಗಿರುವಷ್ಟು ಮಟ್ಟಕ್ಕಿಂತಲೂ ಯಾವಾಗಲೂ ರಕ್ತದ ಒತ್ತಡ ಮಟ್ಟ ಕಡಿಮೆಯಾಗಿಯೋ ಹೆಚ್ಚಾಗಿಯೋ ಇರುವುದು ಈ ರೋಗದ ವೈಶಿಷ್ಟ್ಯ.

ರಕ್ತದ ಒತ್ತಡ ಕುಸಿತ (ಲೋ ಬ್ಲಡ್ ಪ್ರೆಷರ್) : ಹೃದಯದಿಂದ ರೇಚಿಸಲ್ಪಡುವ ರಕ್ತದ ಪ್ರಮಾಣ ಕಡಿಮೆ ಬೀಳುವುದರಿಂದ ಇಲ್ಲವೇ ಅಪಧಮನಿಯ ವ್ಯೂಹದಲ್ಲಿ ರಕ್ತಪ್ರವಾಹಕ್ಕೆ ಅಡಚಣೆ ತಗ್ಗುವುದರಿಂದ ರಕ್ತದ ಒತ್ತಡ ಕುಸಿಯುತ್ತದೆ. ನ್ಯೂಮೋನಿಯಾ, ಟೈಫಾಯಿಡ್, ಡಿಪ್ತೀರಿಯ ಮುಂತಾದ ರೋಗಗಳಲ್ಲಿ ರೋಗಕಾರಕದ ವಿಷಗಳಿಂದ ಹೃದಯಕ್ಕೆ ನಂಜಾಗಿ ರಕ್ತದ ಒತ್ತಡ ಕುಸಿಯಬಹುದು. ಕಿರಿ ಅಪಧಮನಿಗಳ ವ್ಯಾಸ ದೊಡ್ಡದಾಗಿ ರಕ್ತದ ಒತ್ತಡದಲ್ಲಿ ಕುಸಿತ ಉಂಟಾಗುವುದು ಅನೇಕ ಸಂದರ್ಭಗಳಲ್ಲಿ ಕಂಡುಬರುತ್ತದೆ. ಅತಿಯಾದ ಭಯ ಅಥವಾ ಅತಿ ನಾಚಿಕೆಯಂಥ ಭಾವನೋದ್ವೇಗ ಸಂದರ್ಭಗಳಲ್ಲಿ ಕಿರಿಅಪಧಮನಿಗಳು ಹಿಗ್ಗುವುದುಂಟು. ಆದರೆ ಇದು ತಾತ್ಕಾಲಿಕ ಮಾತ್ರ.  ಅಡಿಸನ್ನನ ರೋಗದಲ್ಲಿ ಕಿರಿಧಮನಿಗಳು ಹಿಗ್ಗಿರುವ ಸ್ಥಿತಿ ಕಂಡಬರುವುದಿದೆ. ಇದಕ್ಕೆ ಕಾರಣ ಅಡ್ರಿನಲ್ ಗ್ರಂಥಿ ಅವನತಿಯಿಂದಾಗಿ ದೇಹಕ್ಕೆ ಅಡ್ರಿನಲಿನ ಎಂಬ ಹಾರ್ಮೋನಿನ ಅಭಾವ ಉಂಟಾಗುವುದು. 

ರಕ್ತದ ಒತ್ತಡ ಹಠಾತ್ತಾಗಿ ಕುಸಿದರೆ ತಲೆಸುತ್ತು, ಹೊಟ್ಟೆತೊಳಸು, ಲವಲವಿಕೆ ಇಲ್ಲದಿರುವಿಕೆ ಶೀಘ್ರಸುಸ್ತು. ಮನೋವ್ಯಾಕುಲತೆ, ವಾಕರಿಕೆ, ಚಳಿಚಳಿಯಾಗುವುದು ಇವು ಕಂಡುಬರುತ್ತದೆ. ಕೊನೆಗೆ e್ಞÁನ ತಪ್ಪುವುದೂ ಉಂಟು. ಇವೆಲ್ಲದರ ಕಾರಣ ಒತ್ತಡ ಕುಸಿತದಿಂದಾಗಿ ಮಿದುಳಿಗೆ ಸಾಕಷ್ಟು ರಕ್ತಪೂರೈಕೆ ಆಗುವುದಿಲ್ಲ. ಆದ್ದರಿಂದ ವ್ಯಕ್ತಿ ಮಲಗಿಕೊಂಡರೆ ಮಿದುಳಿನ ರಕ್ತಪೂರೈಕೆ ಉತ್ತಮಗೊಂಡು ಲಕ್ಷಣಗಳು ತಹಬದಿಗೆ ಬರುತ್ತವೆ. ಕೈ ಕಾಲು ನೀವುವಿಕೆ, ಒಳ್ಳೆಯ ಆಹಾರ ನೀಡುವುದು, ಒತ್ತಡ ಕುಸಿತದ ಪರಿಣಾಮಗಳನ್ನು ಎದುರಿಸಬಹುದು.
ಏರಿರುವ ರಕ್ತ ಒತ್ತಡ ಸ್ಥಿತಿ (ರಕ್ತದ ಒತ್ತಡವೇರಿಕೆ, ಹೈ ಬ್ಲಡ್ ಪ್ರೆಷರ್; ಹೈಪರ್ ಪೈಯೀಸಿಯ): ಟೆನ್‍ಷನ್ ಅಥವಾ ಅನೇಕ ಕಾರಣಗಳಿಂದ ಈ ಸ್ಥಿತಿ ಉಂಟಾಗುವುದಿದೆ. ಮಲಬದ್ಧತೆ (ಕರುಳಿನಿಂದ ಹೀರಲ್ಪಟ್ಟ ವಿಷಪದಾರ್ಥಗಳಿಂದಾಗಿ), ತಂಬಾಕು ಮದ್ಯಗಳು ಎರಡನ್ನೂ ಹೆಚ್ಚಾಗಿ ಸೇವಿಸುವುದು, ಮೂತ್ರಪಿಂಡ ಉರಿಯೂತ (ದೇಹದ ವಿಷವಸ್ತುಗಳು ವಿಸರ್ಜನೆ ಆಗದೆ ಉಳಿದುಕೊಳ್ಳುವುದರಿಂದ), ಅಡ್ರಿನಲ್ ಗ್ರಂಥಿಯ ಏರುಮಟ್ಟದ ಕ್ರಿಯೆ, ಅಪಧಮನಿಪೆಡಸಣೆ - ಇವುಗಳಲ್ಲಿ ಕಾಣಬರುವ ರಕ್ತದ ಒತ್ತಡವೇರಿಕೆಗೆ ಆನುಷಂಗಿಕ ನಿವಾರಿಸಿದರೆ ಒತ್ತಡ ಇಳಿಯುತ್ತದೆ. ಆದರೆ ಕಾರಣ ವ್ಯಕ್ತವೇ ಆಗದೆ ರಕ್ತದ ಒತ್ತಡ ಏರಿರುವುದು ತಕ್ಕಮಟ್ಟಿಗೆ ಸಾಮಾನ್ಯವೇ ಆಗಿವೆ. 40 - 45 ವರ್ಷ ಮೀರಿದ ವ್ಯಕ್ತಿಗಳು ಇದಕ್ಕೆ ಬಹಳಷ್ಟು ಈಡಾಗುತ್ತಾರೆ. ಇಂಥ ಒತ್ತಡ ಏರಿಕೆಗೆ ಮೂಲಭೂತ ಒತ್ತಡವೇರಿಕೆ (ಪ್ರೈಮರಿ ಹೈಪರ್ ಟೆನ್ಷನ್, ಎಸ್ಸೆನ್ಷಿಯಲ್ ಹೈಪರ್ ಟೆನ್ಷನ್) ಎಂದು ಹೆಸರು. ಇದರಲ್ಲೂ ಎರಡು ಬಗೆಗಳುವೆ: ಸೌಮ್ಯ (ಬಿನೈನ್) ಮತ್ತು ಉಗ್ರ (ಮ್ಯಾಲಿಗ್ನೆಂಟ್), ಸಾಮಾನ್ಯವಾಗಿ ಕೆಲಸದ ಒತ್ತಡ (ವರ್ಕ್), ಹೆಂಗಸಿನ ಪೀಡೆ (ವುಮೆನ್), ಮದ್ಯ ಸೇವನೆಯ ಚಟ (ವೈನ್), ಮನಸ್ಸಿನ ಚಿಂತೆ (ವರಿ) ಇವುಗಳಿಂದಲೂ ಆನುಷಂಗಿಕ ಕಾರಣಗಳಿಂದಲೂ ವ್ಯಕ್ತಿ ಇಂಥ ರಕ್ತದ ಒತ್ತಡ ಏರಿಕೆಗೆ ತುತ್ತಾಗುತ್ತಾನೆಂದು ಅಭಿಪ್ರಾಯವಿದೆ.

ಸೌಮ್ಯ ರೀತಿಯ, ಮೂಲಭೂತ ರಕ್ತ ಒತ್ತಡ ಏರಿಕೆಯಲ್ಲಿ ಕಂಡುಬರಬಹುದಾದ ಲಕ್ಷಣಗಳು ಎಂದರೆ ಚಟ್ಟನೆ ಬಂದುಹೋಗುವ ತಲೆಸುತ್ತು, ಮುಂಜಾನೆಯೇ ಎರಗುವ ತಲೆನೋವು, ನಿದ್ರಾನಾಶ, ಸುಸ್ತು, ಕಿವಿಯಲ್ಲಿ ಗುಯ್‍ಗುಟ್ಟುವಿಕೆ ಇಂಥವು. ಇವು ರೂಢಿಗತವಾಗಿ ಹೋಗಿರುವ ವ್ಯಕ್ತಿಗೆ ಹೇಳಿಕೊಳ್ಳುವ ತೊಂದರೆಯೇ ಇಲ್ಲವೆನ್ನಿಸಿ, ತಾನು ಆರೋಗ್ಯವಾಗಿಯೇ ಇದ್ದೇನೆ ಎಂಬ ಭಾವನೆ ಇರುತ್ತದೆ. ಆದ್ದರಿಂದ ಬೇರೆ ಯಾವುದೇ ಉದ್ದೇಶಕ್ಕಾಗಿ ರಕ್ತದ ಒತ್ತಡವನ್ನು ಮಾಪಿಸಿದಾಗಲೇ ಇಂಥ ವ್ಯಕ್ತಿಗೆ ಏರಿದ ರಕ್ತದ ಒತ್ತಡವಿರುವುದು ಪತ್ತೆ ಆಗುತ್ತದೆ. ಇಂಥ ಸಂದರ್ಭಗಳು ಬಹಳ ಆಕಸ್ಮಾತ್ತಾಗಿ ರಕ್ತದ ಒತ್ತಡ ಮಾಪನ ಮಾಡುವುದು ತಪ್ಪಿಯೇ ಹೋಗಿದ್ದರೆ ಮೂಗಿನಿಂದ ಆಗಾಗ ರಕ್ತಸ್ರಾವ, ಉಬ್ಬಸ, ದೃಷ್ಟಿಮಾಂದ್ಯ, ರಕ್ತಕಫ, ರಕ್ತಮೂತ್ರ - ಇವುಗಳೇ ಏರಿದ ರಕ್ತ ಒತ್ತಡದಿಂದ ವ್ಯಕ್ತಿ ನರಳುತ್ತಿರಬಹುದೆಂಬುದಕ್ಕೆ ಪ್ರಥಮ ಸೂಚನೆಗಳಾಗಿರಬಹುದು. ಕೆಲವು ಸಂದರ್ಭಗಳಲ್ಲಿ ಮೆದುಳಿನಲ್ಲಿ ಆದ ರಕ್ತಸ್ರಾವದಿಂದ ವ್ಯಕ್ತಿ ಪಕ್ಷಾಘಾತಕ್ಕೆ ಈಡಾಗುವುದು ಪ್ರಥಮಸೂಚನೆ ಆಗಿರಬಹುದು. ಇಂಥ ಸಂಧರ್ಭದಲ್ಲಿ ವ್ಯಕ್ತಿ ಹಠಾತ್ತಾಗಿ ಮೃತನಾಗುವುದಿದ್ದು ಮರಣಕ್ಕೆ ಕಾರಣವೇ ತಿಳಿಯದಂತಿರುವುದೂ ಉಂಟು. ಎದೆನೋವು, ಹೃದಯದ ನೋವು ಇವು ದೀರ್ಘಕಾಲಿಕ ರಕ್ತದ ಒತ್ತಡ ಏರಿಕೆಯ ಸಾಮಾನ್ಯ ಪರಿಣಾಮಗಳು.

ಚಿಕಿತ್ಸೆ : ಕಡಿಮೆ ಆಹಾರ ಸೇವೆನೆ, ಮಲಬದ್ಧತೆಯ ನಿವಾರಣೆ, ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಶಾಂತಿ ಇವು ನಾಲ್ಕೂ ರಕ್ತದ ಒತ್ತಡ ಏರಿಕೆಯ ತಡೆ ಮತ್ತು ಇಳಿತಕ್ಕೆ ಬಲುಮುಖ್ಯ ಕ್ರಮಗಳು. ಕಾಫಿ, ಮದ್ಯ, ಮಾಂಸಗಳನ್ನು ಕಡಿಮೆ ಮಾಡುವುದೋ ಬಿಟ್ಟೇಬಿಡುವುದೋ ಬಲು ಒಳ್ಳೆಯದು. ರಕ್ತದ ಒತ್ತಡವೇರಿಕೆಗೆ ಸೇವಿಸುವ ಉಪ್ಪು ಸಹಕಾರಿ ಎನ್ನಿಸಿರುವುದರಿಂದ ಉಪ್ಪುಸೇವನೆಯನ್ನು ಮೊಟಕು ಮಾಡಬೇಕು. ಆಹಾರ ತಯಾರಿಕೆಯಲ್ಲೇ ಇದನ್ನು ಸಾಧಿಸುವುದಲ್ಲದೆ, ಮೇಲುಪ್ಪು, ಉಪ್ಪಿನಕಾಯಿ ಮುಂತಾದುವುದನ್ನು ಬಳಸುವುದನ್ನೂ ಬಿಡಬೇಕು. ದೇಹದಲ್ಲಿ ಉಪ್ಪಿನ ಮಟ್ಟ ಹೆಚ್ಚಿಯೇ ರಕ್ತದ ಒತ್ತಡ ಮಟ್ಟಕ್ಕೆ ಕಾರಣವಾಗಿರಬಹುದಾದ್ದರಿಂದ ಉಪ್ಪಿನ ಮಟ್ಟ ದೇಹದಲ್ಲಿ ಕಡಿಮೆ ಆಗುವಂತೆ ಔಷಧಿಗಳನ್ನು ಕೊಡುವುದಿದೆ. ಆದರೆ ಹೀಗೆ ಉಪ್ಪನ್ನು ದೇಹ ಕಳೆದುಕೊಳ್ಳುವಂತೆ ಮಾಡುವಾಗ ಪೊಟ್ಯಾಸಿಯಮ್ ಲವಣಗಳು ಕಳೆದುಹೋಗಬಹುದು.  ಆದ್ದರಿಂದ ಯುಕ್ತ ಎಚ್ಚರಿಕೆ ತೆಗೆದುಕೊಳ್ಳಬೇಕಾದುದು ಅನಿವಾರ್ಯ.

ಅಪಧಮನಿಗಳು ಕುಗ್ಗುವುದನ್ನು ತಪ್ಪಿಸುವ ಔಷಧಿಗಳು, ಅವನ್ನು ವಾಸ್ತವವಾಗಿ ಹಿಗ್ಗಿಸುವ ಔಷಧಿಗಳು ಮನಶ್ಯಾಂತಿಗಾಗಿ ಕೊಡುವ ಔಷಧಿಗಳು ಇವುಗಳನ್ನು ಪ್ರತ್ಯೇಕವಾಗಿಯೋ ಒಟ್ಟಾಗಿಯೋ ಚಿಕಿತ್ಸೆಕಗಳಾಗಿ ಬಳಸುವುದು ರೂಢಿ. ಆದರೆ ಇವನ್ನೆಲ್ಲ ಬಳಸಿ ಏರಿರುವ ರಕ್ತ ಒತ್ತಡವನ್ನು ದಿಢೀರೆಂದು ಮಾಮೂಲು ಮಟ್ಟಕ್ಕೆ ಇಳಿಸುವುದಕ್ಕೆ ಪ್ರಯತ್ನಿಸಿವುದಾಗಲಿ ತಪ್ಪು. ವ್ಯಕ್ತಿ ಏರಿದ ರಕ್ತದ ಒತ್ತಡಸ್ಥಿತಿಗೆ ಸ್ವಲ್ಪಮಟ್ಟಿಗೆ ಒಗ್ಗಿಕೊಂಡಿರುತ್ತಾನೆಂಬುದನ್ನು ಗ್ರಹಿಸಿ ಚಿಕಿತ್ಸೆ ಮಾಡುವಾಗ ರಕ್ತದ ಒತ್ತಡ ಮಾಮೂಲಾಗಿ ಇರಬೇಕಾದ ಮಟ್ಟಕ್ಕಿಂತಲೂ ಸ್ವಲ್ಪ ಹೆಚ್ಚಾಗಿ ಇರುವಂತೆಯೇ ಚಿಕಿತ್ಸೆಯನ್ನು ನಿಯಂತ್ರಿಸಬೇಕು.

ಥಯಾಜಿಠ್ ಮೂತ್ರವರ್ಧಕಗಳು, ಭಿಟಾ ಅಡ್ರಿನೋಗ್ರಾಹಕಗಳ ಪ್ರತಿರೋಧಿಗಳು, ಆಂಜಯೆಟೆನ್ಸಿಸ್ ಮಾರ್ಪಡಿಸುವ ಕಿಣ್ವದ ಪ್ರತಿಬಂಧಕಗಳು, ಆಂಜಿಯೋಟೆನ್ಸಿಸ್ II ಗ್ರಾಹಕಗಳ ಪ್ರತಿಬಂಧಕಗಳು, ಕ್ಯಾಲ್ಸಿಯಂ ವಿರೋಧಿಗಳು, ರಕ್ತದ ಏರೊತ್ತಡದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅದರ ಜೊತೆಗೆ ವ್ಯಕ್ತಿಯ ಜೀವನ ಶೈಲಿಯೂ ಬದಲುಗೊಳ್ಳುವುದೂ ಮುಖ್ಯ.  										  (ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ